Wednesday 13 April 2011

ಸವಿ ಸವಿ ನೆನಪು... (ಭಾಗ ೧)

[Dear friends..  ಇದು ಯಾವುದೇ ಕಾಲ್ಪನಿಕ ಕಥೆ ಅಲ್ಲ. ನನ್ನ ಆತ್ಮೀಯ ಗೆಳೆಯನೊಬ್ಬನ ಜೀವನದಲ್ಲಿ  ನಡೆದ ಘಟನೆ. (ಹೆಸರನ್ನು ಮಾತ್ರ ಬದಲಿಸಲಾಗಿದೆ) ಅವನ ಭಾವನೆಗಳನ್ನು ನನ್ನ ಶಬ್ಧರೂಪದಲ್ಲಿ ತರುವ ಸಣ್ಣ ಪ್ರಯತ್ನ ಮಾಡಿದ್ದೀನಿ. ತಪ್ಪಿದ್ದಲ್ಲಿ ತಿದ್ದಿ ನಿಮ್ಮ ಅಭಿಪ್ರಾಯ ತಿಳಿಸಿ...]


'ಅಕ್ಕಿ, ನಮ್ಮನೆ ಹಿಂದಿನ ರಸ್ತೆಯಲ್ಲಿ ಒಂದು ಪುಟ್ಟ ಗಣೇಶನ ಗುಡಿ ಇತ್ತಲ್ಲ ಅದನ್ನು ದೊಡ್ಡದಾಗಿ ಕಟ್ಟಿಸಿದಾರಂತೆ. ಹಿಂದಿನಸಾರಿ ರಾಧಕ್ಕ ಸಿಕ್ಕಾಗ ಹೇಳಿದ್ದರು. ಮರೆಯದೆ ಅಲ್ಲಿಗೆ ಹೋಗಿ ಅರ್ಚನೆ ಮಾಡಿಸಿಕೊಂಡು ಬಾ. ಹಾಗೆ ರಾಧಕ್ಕನ ಮನೆಗೂ ಹೋಗೋದು ಮರಿಬೇಡ.ಹತ್ತು ಹದಿನೈದು ವರ್ಷ ಆಯ್ತು ನೀನು ಅಲ್ಲಿಗೆ ಹೋಗಿ.ನಾವೂ ಮೂರು ವರ್ಷದ ಹಿಂದೆ ಹೋಗಿದ್ದು ಅಲ್ವ?' ಎನ್ನುತ್ತ ಚಕ್ಕುಲಿ, ಉಂಡೆ ಪ್ಯಾಕೇಟ್ ಮಾಡುತ್ತಿದ್ದ ಅಮ್ಮ ಅಪ್ಪನ ಮುಖ ನೋಡಿದರು.

ಅಪ್ಪ 'ಹುಂ' ಅನ್ನುವಂತೆ ತಲೆಯಾಡಿಸಿದ್ರು.

'ಅಮ್ಮ, ಇದೆಲ್ಲ ಯಾಕೆ? ನಾನು ಯಾರದೊ ಮನೆಗೆ, ಊರು ಸುತ್ತಕ್ಕೆ ಹೋಗ್ತಾ ಇಲ್ಲ. ನನ್ನ ಫ್ರೆಂಡ್ ಜೊತೆ ಕೆಲಸದ ಮೇಲೆ ಹೋಗ್ತ ಇರೋದು. ನಿನಗೆ ಗೊತ್ತಿರೋ ಜಾಗ ಜೊತೆಗೆ ಬಾರೋ ಅಂತ ತುಂಬಾ ಕರೆದಿರೋದಕ್ಕೆ ಹೋಗುತ್ತಿರೋದಷ್ಟೆ. ಇದೆಲ್ಲ ಯಾಕಮ್ಮ?' ಅಂದೆ.

'ನೀನು ಹುಟ್ಟಿದ ಊರು ಕಣೋ. ನೋಡು ಅಲ್ಲಿಗೆ ಹೋಗಿ ನಿನಗೂ ಖುಷಿಯಾಗುತ್ತೆ. ಎಲ್ಲರು ಎಷ್ಟು ಇಷ್ಟ ಪಡ್ತಾರೆ. ನಾರಾಯಣ ಮೇಷ್ಟ್ರ ಮನೆಯಲ್ಲೇ ಉಳಿದುಕೊಳ್ಳಿ. ನಾನಾಗಲೇ ಅವರಿಗೆ ಫೋನ್ ಮಾಡಿ ಹೇಳಿದ್ದೀನಿ' ಅಪ್ಪ ಹೇಳಿದರು.

ಅಮ್ಮನ ಮುಖದಲ್ಲಿ ಸಂಭ್ರಮವಿತ್ತು. ಅಪ್ಪನೂ ಅಮ್ಮನಿಗೆ ಸಪೋರ್ಟ್ ಮಾಡ್ತಾ ಇದಾರಲ್ಲ ಇನ್ನು ಹೇಳಿ ಪ್ರಯೋಜನ ಇಲ್ಲ ಅನ್ನಿಸಿ, 'ಸರಿ ಧೀರಜ್ ಬರೋ ಟೈಮ್ ಆಯ್ತು ನಾನು ರೆಡಿಯಾಗ್ತಿನಿ' ಅಂತ ಅಲ್ಲಿಂದ ಕಳಚಿಕೊಂಡೆ.

ಓ ನಿಮಗೆ ಕನ್ ಪ್ಯೋಸ್ ಆಗ್ತಾ ಇದ್ಯಾ? ನಾನು ಯಾರು ಏನು ಅಂತಾನೇ ಗೊತ್ತಾಗ್ತಿಲ್ಲ ಅಲ್ವ? ಈಗ ಹೇಳ್ತಿನಿ ಕೇಳಿ...

ನನ್ನ ಹೆಸರು ಆಕಾಶ್. ಅಮ್ಮ ಪ್ರೀತಿಯಿಂದ 'ಅಕ್ಕಿ' ಅಂತ ಕರೆಯೋದು. (rice ಅಲ್ಲ.) ನಾನೊಬ್ಬ software engineer (unfortunately!) ಅಪ್ಪ ಅಮ್ಮನ ಜೊತೆ ಬೆಂಗಳೂರಿನಲ್ಲಿ ಇರೋದು. ನನ್ನ ಹುಟ್ಟೂರು ಚಿಕ್ಕಮಂಗಳೂರಿನ ಹತ್ತಿರ ಒಂದು ಪುಟ್ಟ ಹಳ್ಳಿ! 'ಈಗ ತುಂಬಾ ಬದಲಾಗಿದೆ ಹಳ್ಳಿ ಅಂತಲೇ ಅನಿಸಲ್ಲ ಕಣೋ' ಅಂತ ಅಮ್ಮ ಹೇಳ್ತ ಇದ್ರು. ನಾನು ನೋಡಿಲ್ಲ. 7th ವರೆಗೂ ಓದಿದ್ದೆಲ್ಲ ಅಲ್ಲೆ. ಆಮೇಲೆ, ಇರುವ ಸ್ವಲ್ಪ ಜಮೀನನ್ನು ಮಾರಿ ಅಪ್ಪ ಸೇರಿದ್ದು ಈ ಮಹಾನಗರಿ ಬೆಂಗಳೂರನ್ನು. ಅಲ್ಲಿಂದ ಹೊರಟುಬಂದ ಮೇಲೆ ಒಂದು ಬಾರಿಯೂ ನಾನು ಆ ಊರಿಗೆ ಕಾಲಿಟ್ಟಿಲ್ಲ. ಹೋಗಬಾರದು ಅಂತೆನೂ ಇಲ್ಲ. ಅವಕಾಶ ಸಿಕ್ಕಿರಲಿಲ್ಲ. ನನ್ನ ಓದು, ಕೆಲಸ, ವಿದೇಶ ಸುತ್ತಿದ್ದು ಇದರ ಮಧ್ಯೆ ಆ ಚಿಕ್ಕ ಊರಿನ ನೆನಪು ಬರುತ್ತಾ?! ಆಗೊಮ್ಮೆ ಈಗೊಮ್ಮೆ....

ಧೀರಜ್ ನನ್ನ ಪ್ರೆಂಡ್. PU ಇಂದಲೂ ನಾವಿಬ್ಬರು ಒಟ್ಟಿಗೇ ಓದಿದ್ದು. ನಮ್ಮಮ್ಮನಿಗೆ ಎರಡನೇ ಮಗ ಇದ್ದಂತೆ. ಇತ್ತೀಚೆಗೆ ಅವನಿಗೊಂದು ಕ್ರೇಸ್. ಚಿಕ್ಕಮಂಗಳೂರಿನ ಹತ್ತಿರದೆಲ್ಲಾದರೂ ಒಂದು ಜಾಗ ತಗೋಂಡು ಪುಟ್ಟದೊಂದು ರೆಸೊರ್ಟ್ ತರಹದ್ದು ಮಾಡಬೇಕು ಅಂತ. 'girl friend ಗೆ gift ಮಾಡಕ್ಕಾ?' ಅಂತ ಆಗಾಗ ರೇಗಿಸ್ತಿದ್ದೆ ನಾನು. ಅದೇ ವಿಷಯವಾಗಿ ಮತ್ತೆ ನಾನು ನನ್ನ ಹುಟ್ಟಿದೂರಿಗೆ ಹೊರಟಿದ್ದೆ.

ಚಿಕ್ಕಮಂಗಳೂರು ಅಂತ ಹೆಸರು ಕೇಳಿದರೆ ತಕ್ೞಣ ನನ್ನ ನೆನಪಿಗೆ ಬರುವುದೇ ಆ ಬೆಳ್ಳಿಯ ಕಾಲ್ಗೆಜ್ಜೆ... ಬೆಳದಿಂಗಳಿನಂತ ಮುಖ.. ಆ ಬೊಗಸೆಗಣ್ಣುಗಳು.. ತುಟಿಯ ತಿರುವಿನಲ್ಲೊಂದು ಪುಟ್ಟ ದೃಷ್ಟಿಬೊಟ್ಟು. ಹೂಂ.. ಅವಳು 'ಸುಮ'. ಹೆಸರಿಗೆ ತಕ್ಕಂತೆ ಸುಮಧುರವಾದ ಹುಡುಗಿ. ನನ್ನ first love!!


ನಾನವಳನ್ನು ಮೊದಲನೇ ಬಾರಿ ನೋಡಿದ್ದು 5 ನೇ ಕ್ಲಾಸಿನಲ್ಲಿದ್ದಾಗ. ಸ್ಕೂಲಿನಲ್ಲಿ ಏನೋ ಕಿಡಿಗೇಡಿ ಕೆಲಸ ಮಾಡಿದೆ ಅಂತ ಮೇಷ್ಟ್ರು ಬೇಂಚಿನಮೇಲೆ ಬಗ್ಗಿ ನಿಲ್ಲಿಸಿದ್ದರು. ತಲೆ ಎತ್ತಿದರೆ ಬೆತ್ತ ಬೀಳುತ್ತಿತ್ತು. ಅವಳಿನ್ನು ನಮ್ಮ ಸ್ಕೂಲಿಗೆ ಹೊಸಬಳು. ಅಂದೇ ಮೊದಲ ದಿನ. ಸ್ವಲ್ಪ ತಡವಾಗಿಯೇ ಕ್ಲಾಸಿಗೆ ಬಂದಿದ್ದಳು. ನನ್ನ ಪಕ್ಕ ಇದ್ದ ಗೆಳೆಯರೆಲ್ಲ 'ಹೊಸ ಹುಡುಗಿ ಕಣೋ' ಅಂತಿದ್ದರು. ನನಗೋ ತಲೆ ಎತ್ತಿ ನೋಡುವಂತಿಲ್ಲ. ಆದರೂ ಕಷ್ಟಪಟ್ಟು ಕಣ್ಣನ್ನಷ್ಟೇ ತಿರುಗಿಸಿ ನೋಡಿದ್ದೆ. ಕಾಣಿಸಿದ್ದು, ರೇಶಿಮೆ ಲಂಗದ ಅಂಚಿನಲ್ಲಿ ಸುಂದರವಾದ ಪಾದ, ಅಲ್ಲೊಂದು ಬೆಳ್ಳಿಯ ಕಾಲ್ಗೆಜ್ಜೆ ಅಷ್ಟೆ...! ಅವತ್ತಿನಿಂದ ಆ ಕಾಲ್ಗೆಜ್ಜೆಯ ನಾದಕ್ಕೆ ನನ್ನ ಮನ ಕುಣಿಯಲು ಪ್ರಾರಂಭಿಸಿತ್ತು. ಮಾರನೆಯ ದಿನದಿಂದ ಕ್ಲಾಸಿನಲ್ಲಿ ಪೂರ್ತಿ ಅವಳನ್ನು ನೋಡುತ್ತಾ ಕುಳಿತಿರುವುದೊಂದ ಕೆಲಸ. ಆ ಗುಲಾಬಿ ಕೆನ್ನೆಗಳು.. ತುಟಿಯ ಬಲ ತಿರುವಿನಲ್ಲೊಂದು ದೃಷ್ಟಿಬೊಟ್ಟು ಇಟ್ಟಂತೆ ಪುಟ್ಟ ಮಚ್ಚೆ... ಕುತೂಹಲ ತುಂಬಿದ ಕಣ್ಣುಗಳು.. ಕಿವಿಯಲ್ಲೊಂದು ಓಲಾಡುವ ಜುಮುಕಿ.. ಕೈಯಲ್ಲಿ ಒಂದೇ ಒಂದು ಬಳೆ... ಯಾವತ್ತೂ ಘಲ್ ಘಲ್ ಅಂತ ಸದ್ದುಮಾಡುತ್ತ ತನ್ನ ಇರುವಿಕೆಯನ್ನು ಹೇಳುವ ಕಾಲ್ಗೆಜ್ಜೆ.... ಊಹುಂ ಪಾಠ ತಲೆಗೆ ಹತ್ತಲೇ ಇಲ್ಲ!. ವಾರದ ಆರೂ ದಿನ ಅವಳಿಗೋಸ್ಕರವೇ ಸ್ಕೂಲಿಗೆ ಹೋಗುತ್ತಿದ್ದೆ! ಭಾನುವಾರದಂದು ಮಾತ್ರ ಜೀವಹೊದಂತೆ ಆಗುತ್ತಿತ್ತು. ನಮ್ಮ ಮನೆಯ ತೋಟದಲ್ಲಿ ಕುಳಿತರೆ ಅವರ ಮನೆ ಕಾಣಿಸುತ್ತಿತ್ತು. ಊಟ ತಿಂಡಿ ಬಿಟ್ಟು ಅವಳು ಮನೆಯಿಂದ ಹೊರಬರುವುದನ್ನೆ ಕಾಯುತ್ತ ತೋಟದಲ್ಲಿ ಕುಳಿತಿರುತ್ತಿದ್ದೆ. ಎಷ್ಟೊ ಗಂಟೆಗಳವರೆಗೆ ಆ ಮನೆಯನ್ನೇ ದಿಟ್ಟಿಸುತ್ತಿದ್ದೆ ಒಂದೇ ಒಂದುಬಾರಿ ಅವಳನ್ನು ನೋಡುವುದಕ್ಕೋಸ್ಕರ! ಎರಡು ವರ್ಷಗಳವರೆಗೂ ನಾನು ಮಾಡಿದ್ದು ಇದೊಂದೇ ಕೆಲಸ. ಒಂದು ಬಾರಿಯೂ ಅವಳನ್ನೂ ಮಾತನಾಡಿಸುವ ಧೈರ್ಯ ಬರಲೇ ಇಲ್ಲ. ಇನ್ನು ಅವಳು.. ಮೊದಲ ಬಾರಿ ನೋಡಿದಾಗ ಹೇಗಿದ್ದಳೋ ಹಾಗೆ ಇದ್ದಳು. ಅದೇ ಮುಗ್ಧತೆ, ಅದೇ ಸೌಮ್ಯತೆ.. ಅವಳು ಸ್ವಲ್ಪವೂ ಬದಲಾಗಲೇ ಇಲ್ಲ! ಎಷ್ಟೋಸಾರಿ ಮನೆಗೆ ಬರುತ್ತಿದ್ದಳು. ಅಮ್ಮನಿಗೆ ಅವಳೆಂದರೆ ಇಷ್ಟ ಆಗಿತ್ತು. ಮಾತಾನಾಡುವುದಂತೂ ದೂರದ ಮಾತು.. ಮುಖನೋಡಿ ಒಂದು smile  ಮಾಡಿದವಳಲ್ಲ. ನಾನೂ ಅಷ್ಟೆ!

ನನ್ನದು 7th ಮುಗಿದಿತ್ತು. ನಾವು ಶಾಶ್ವತವಾಗಿ ಆ ಊರನ್ನು ಬಿಡ್ತಾಇದ್ವಿ. ನಾವು ಹೊರಡುವ ಸಮಯದಲ್ಲಿ ಅವಳ ಮನೆಯ ಗೇಟಿನಬಳಿ ನಿಂತಿದ್ದಳು. 'ಇನ್ಯಾವತ್ತೂ ಬರಲ್ವಾ?' ಅವಳು ನನಗೆ ಕೇಳಿದ ಮೊದಲ ಮತ್ತು ಕೊನೆಯ ಪ್ರಶ್ನೆ! 'ಗೊತ್ತಿಲ್ಲ' ನನ್ನ ಉತ್ತರ ಇಷ್ಟೆ. ಕೂತೂಹಲ ಭರಿತವಾಗಿರುತ್ತಿದ್ದ ಅವಳ ಕಣ್ಣುಗಳಲ್ಲಿ ಅವತ್ತು ನೋವಿದೆ ಅನ್ನಿಸಿತ್ತು. ಬೆಂಗಳೂರು ಸೇರಿನ ಒಂದು ತಿಂಗಳವರೆಗೂ ನನ್ನನ್ನು ಕಾಡಿದ್ದು ಅದೇ ಕಣ್ಣು.. ಅದೇ ಕಾಲ್ಗೆಜ್ಜೆಯ ಸದ್ದು..! ನನ್ನ ನೋವು, ಸಂಕಟ ಹೇಳತೀರದು. ಈ ಬೆಂಗಳೂರಿನ ಮಹಿಮೆ ಎಂತಹುದು ನೋಡಿ... ಎಂತಹ ನೋವು, ನೆನಪುಗಳನ್ನೂ ಮರೆಸಿ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ. ನನಗಾಗಿದ್ದೂ ಹಾಗೆ. ಸ್ವಲ್ಪೇ ದಿನದಲ್ಲಿ ನಾನೂ ಬೆಂಗಳೂರಿಗನಾಗಿ ಹೋಗಿದ್ದೆ. ಆದರೆ ಎಂದೋ ಒಮ್ಮೊಮ್ಮೆ ಆ ಗೆಜ್ಜೆಯ ಸದ್ದು ನನ್ನನ್ನು ಕಾಡದೇ ಇರಲಿಲ್ಲ..


ಈಗೇ ನಾಲಕ್ಕು ವರ್ಷಗಳ ಹಿಂದೆ ಅಮ್ಮ ಇದ್ದಕ್ಕಿದ್ದಂತೆ ಕೇಳಿದ್ದರು 'ಚಿಕ್ಕಮಂಗಳೂರಿನಲ್ಲಿ ಇದ್ದಾಗ ಸುಮ ಅಂತ ಒಬ್ಬಳು ಚೆಂದದ ಹುಡುಗಿ ನಮ್ಮನೆಗೆ ಬರ್ತಿದ್ದಳು ನೆನಪಿದೆಯಾ? ನಿಮ್ಮದೇ ಸ್ಕೂಲಿನಲ್ಲಿ ಓದ್ತಿದ್ಲಲ್ಲೋ' ಅಂತ. ತಕ್ೞಣ ಕುತೂಹಲ ಜಾಸ್ತಿ ಆಗಿತ್ತು. ಅವಳೇನಾದ್ರೂ ನಮ್ಮ ಮನೆಗೆ ಬರ್ತಿದಾಳಾ? ಬೆಂಗಳೂರಿನಲ್ಲೇ ಇದಾಳ? ಇಲ್ಲ ಅಮ್ಮ ಅವಳನ್ನೇ ಸೊಸೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದಾರ? oh my god.. ನನ್ನ ಎದೆ ಬಡಿತ ಜೋರಾಗಿತ್ತು. ಆದರೂ ತಣ್ಣನೇಯ ದನಿಯಲ್ಲಿ ಹೇಳಿದ್ದೆ
'ಹೂಂ ಅಮ್ಮ ನೆನಪಿದೆ. ಏನಂತೆ?' ಅಂತ, ಅವಳನ್ನೆನಾದರೂ ಮರೆಯಲು ಸಾಧ್ಯವಾ ಅಂತ ಮನದಲ್ಲೇ ಅಂದುಕೊಳ್ಳುತ್ತ.

'ಅವಳದು ಮದುವೆ ಆಯಿತಂತೆ ಕಣೋ' ಗೆಜ್ಜೆಯ ನಾದಕ್ಕೆ ಕುಣಿಯುತ್ತಿದ್ದ ಮನಸ್ಸು ಲಕ್ೞಣ ಸ್ಥಬ್ದವಾಗಿತ್ತು.

'ಅವಳಿಗೆ ಮುಂದೆ ಓದೋಕೆ, ಕೆಲಸ ಮಾಡೋಕೆ ಇಷ್ಟ ಇತ್ತಂತೆ. ಆದರೆ ಎನು ಮಾಡ್ತೀಯ, ಹಿಂದಿನ ವರ್ಷವೇ ಅವರಮ್ಮ ತೀರಿಕೊಂಡಿದ್ರಂತೆ. ಅಪ್ಪನಿಗೂ ಆರೋಗ್ಯಸರಿ ಇರಲ್ಲ ಮುಂದೆ ಅವಳನ್ನು ನೋಡಿಕೊಳ್ಳೊಕೆ ಯಾರೂ ಇರಲ್ಲ ಅಂತ ಒತ್ತಾಯದಿಂದ ಮದುವೆ ಮಾಡಿದ್ರಂತೆ. ಅವಳ ಮದುವೆಯಾಗಿ ಒಂದೇ ವಾರದಲ್ಲಿ ಅವರಪ್ಪನೂ ತೀರಿಕೊಂಡರಂತೆ. ಊರಿನವರೊಬ್ಬರು ಸಿಕ್ಕಿದ್ರು ಹೇಳಿದ್ರು. ಪಾಪದ ಹುಡುಗಿ ಕಣೋ. ಮಧ್ಯಾನ್ಹ ಎರಡು ತುತ್ತು ಗಂಟಲಲ್ಲಿ ಇಳಿಯಲಿಲ್ಲ ಈ ವಿಷಯ ಕೇಳಿ' ಅಮ್ಮ ವ್ಯಥೆಯಿಂದ ಹೇಳಿದರು.
ಅಮ್ಮನೇ ಇಷ್ಟು ನೋವು ಪಡುತ್ತಿರುವಾಗ ಇನ್ನು ನನ್ನ ಗತಿ!! ಒಂದು ವಾರ ಏನೋ ಸಹಿಸಲಾಗದ ಸಂಕಟ.. ಅರ್ಥವಾಗದ ತಳಮಳ..
'ಛೆ ಈ ಹುಡುಗಿಯರ್ಯಾಕೆ ಬೇಗ ಮದುವೆಯಾಗಿ ಇಡುತ್ತಾರೋ?!'

ದಿನ ಕಳೆದಂತೆ ಆ ನೋವು ಮರೆಯಾಗಬೇಕಿತ್ತು. ಎಲ್ಲೊ ಒಮ್ಮೊಮ್ಮೆ ಹಳೆಯ ನೆನಪುಗಳೆಲ್ಲ ಬಂದು ಕಾಡುತ್ತಿತ್ತು. ಮತ್ತೆ ಆ ಊರಿಗೆ ಹೋಗಲೇ ಬಾರದು ಎಂದುಕೊಂಡಿದ್ದೆ. ಆದರೆ ಈಗ ನನ್ನ ಪ್ರೆಂಡ್ ಗೋಸ್ಕರ ಹೊರಟಿದ್ದೀನಿ. ಒಂದು ಕಡೆ ಖುಷಿ... ಇನ್ನೊಂದು ಕಡೆ ಹೇಳಿಕೊಳ್ಳಲಾಗದ ಸಣ್ಣ ಆತಂಕ... ಇನ್ನು ಆ ಊರಿನಲ್ಲಿ ನನಗೋಸ್ಕರ ಏನು ಕಾಡಿದೆಯೋ.....?!!
                                                     --------------------------
[ಮುಂದಿನ ಭಾಗ ಆದಷ್ಟು ಬೇಗ...!]

12 comments:

  1. moda modalaagi mechida hrudaya........:)
    savi savi nenapu saavira nenapu....

    ReplyDelete
  2. thanks ajay... nimma abhimana heege irali...

    ReplyDelete
  3. Sankeerthana,

    barahadalli aatmeeyate ide,

    sundara shaili

    ella baraha oduttene

    ReplyDelete
  4. ಸಾಗರದಾಚೆಯ ಇಂಚರ,

    nanna baraha ista pattiddira thumba dhanyavaadagalu...

    ReplyDelete
  5. ಚೆನ್ನಾಗಿದೆ ಶೈಲಿ..ಮುಂದುವರೆಯಲಿ ಹೀಗೆ

    ReplyDelete
  6. ಸಂಕೀರ್ತನ...ಇಷ್ಟ ಆಯ್ತು ನಿಮ್ಮ ಪ್ರಸ್ತಾವನಾ ಶೈಲಿ ಕಥೆಗೆ (ವಾಸ್ತವ ನಡೆದದ್ದೇ ಆದ್ರೂ) ಒಳ್ಳೆ ಓದಿಸಿಕೊಂಡು ಹೋಗೋ ವೇಗ ಮತ್ತು ಆಸಕ್ತಿ ತುಂಬಿದ್ದೀರಿ...ಮುಂದಿನ ಕಂತಿಗೆ ಕಾಯುವೆ...

    ReplyDelete
  7. ಕಥೆಯ ಶೈಲಿ, ಲಯ, ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ಗುಣ ಎಲ್ಲ ಸೊಗಸಾಗಿದೆ. ಅಭಿನಂದನೆಗಳು.

    ReplyDelete
  8. ಚೆನ್ನಾಗಿದೆ. ಓದಿಸಿಕೊಂಡು ಹೋಗುವ ಗುಣ ನಿಮ್ಮ ಬರವಣಿಗೆಗೆ ಇದೆ.ಶುಭವಾಗಲಿ

    ReplyDelete
  9. ಚೆನ್ನಾಗಿದೆ ಶೈಲಿ,
    ಮುಂದಿನ ಕಂತಿಗೆ ಕಾಯುವೆ...

    ReplyDelete
  10. ಮುಂದೇನಾಯಿತೋ ? :)
    ಬರಹ ಚೆನ್ನಾಗಿದೆ ರೀ ...

    ReplyDelete
  11. ಚನ್ನಾಗಿದೆ ಸಂಕೀರ್ತನಾ.......

    ಇಷ್ಟವಾಯ್ತು........

    ReplyDelete